Home / News / India / ಆತ್ಮ ಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ₹ 2 ಸಾವಿರ ಮಾಸಾಶನ

ಆತ್ಮ ಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ₹ 2 ಸಾವಿರ ಮಾಸಾಶನ

ಗುಡಗೂರ (ಹಾವೇರಿ ಜಿಲ್ಲೆ): ‘ಸಾಲಬಾಧೆ, ಬೆಳೆ ಹಾನಿಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ನೀಡಲಾಗುವ ಪರಿಹಾರಧನವನ್ನು ₹ 2 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗುವುದು. ಮೃತ ರೈತನ ಪತ್ನಿಗೆ ₹ 2 ಸಾವಿರ ಮಾಸಾಶನ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಘೋಷಿಸಿದರು.

ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಆತ್ಮಹತ್ಯೆ ಮಾಡಿಕೊಂಡ ಭೂರಹಿತ ಕೃಷಿ ಕಾರ್ಮಿಕರ ಕುಟುಂಬಕ್ಕೂ ಇಷ್ಟೇ ಮೊತ್ತದ ಪರಿಹಾರ ನೀಡಲಾಗುವುದು. ಅದಕ್ಕಾಗಿ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಈಗಿರುವ ನಿಯಮಾವಳಿ ಬದಲಿಸಲಾಗುತ್ತದೆ’ ಎಂದು ಪ್ರಕಟಿಸಿದರು.

‘ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡರೆ ಆಕೆಯ ಕುಟುಂಬದ ಸದಸ್ಯರೊಬ್ಬರಿಗೆ ಮಾಸಾಶನ ನೀಡಲಾಗುವುದು. ಸಂತ್ರಸ್ತ ಕುಟುಂಬದ ಮಕ್ಕಳ ಸ್ನಾತಕೋತ್ತರ ಪದವಿ ವರೆಗಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದರು. ‘ಸಂತ್ರಸ್ತ ಕುಟುಂಬಕ್ಕೆ ಆರೋಗ್ಯ ರಕ್ಷಣೆ ನೀಡುವ ಉದ್ದೇಶದಿಂದ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಯ ವೆಚ್ಚವನ್ನೂ ಸರ್ಕಾರವೇ ಭರಿಸಲಿದ್ದು, ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು’ ಎಂದು ಹೇಳಿದರು.

‘ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಪಡೆದ ಸಾಲದ ಮೊತ್ತ ₹ 29 ಸಾವಿರ ಕೋಟಿಯಷ್ಟಿದೆ. ಈ ಮೊತ್ತದಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಅರ್ಧದಷ್ಟನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧ’ ಎಂದೂ ಸಿದ್ದರಾಮಯ್ಯ ತಿಳಿಸಿದರು.

‘ರೈತರು ಪಡೆದ ಸಾಲವನ್ನು ಮರುಹೊಂದಾಣಿಕೆ ಮಾಡುವಂತೆ ಮತ್ತು ಒಂದು ವರ್ಷದವರೆಗೆ ಸಾಲ ಮರು ಪಾವತಿಗೆ ಒತ್ತಾಯಿಸದಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಥರ ಸೂಟ್‌ಬೂಟ್‌ ನಾಯಕ ಅಲ್ಲ. ನಿಮ್ಮಂತೆಯೇ ರೈತ
– ರಾಹುಲ್‌ ಗಾಂಧಿ
*
ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲದ ಮೇಲಿನ ಸೆ. 30ರ ವರೆಗಿನ ಸುಸ್ತಿ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಲಿದೆ.
ಸಿದ್ದರಾಮಯ್ಯ,
ಮುಖ್ಯಮಂತ್ರಿ

prajavani

Leave a Reply

Your email address will not be published. Required fields are marked *

*