Home / Kannada / ಕೊಡಗಿನ ರಾಜಕೀಯ ಚಿತ್ರಣವೇ ‘ಬದಲು’

ಕೊಡಗಿನ ರಾಜಕೀಯ ಚಿತ್ರಣವೇ ‘ಬದಲು’

ಮಡಿಕೇರಿ:  ಕಳೆದ ವಾರ ಟಿಪ್ಪು ಜಯಂತಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಘಟನೆಗಳು ಕೊಡಗು ಜಿಲ್ಲೆಯ ರಾಜಕೀಯ ಚಿತ್ರಣವನ್ನೇ ಬದಲು ಮಾಡಿ ಹಾಕಿವೆ.

ಆರಂಭದ ಹಂತವಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ‘ತಲೆದಂಡ’ವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಯಾಗುವ ಮುನ್ಸೂಚನೆ ಕಂಡುಬಂದಿದೆ.

ಟಿಪ್ಪು ಜಯಂತಿಯನ್ನು ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ನ. 10ರಂದು ಸ್ವಯಂ ಪ್ರೇರಿತ ಬಂದ್‌ ಹಾಗೂ ಕರಾಳ ದಿನಾಚರಣೆಗೆ ಕರೆ ನೀಡಿದ್ದವು. ಇದಕ್ಕೆ ತಕ್ಕನಾಗಿ ಎದಿರೇಟು ನೀಡುವಲ್ಲಿ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಬಿ.ಟಿ. ಪ್ರದೀಪ್‌ ವಿಫಲರಾದರು.

ಕಾಂಗ್ರೆಸ್‌ ಸರ್ಕಾರವೇ ಘೋಷಿಸಿದ್ದ ಟಿಪ್ಪು ಜಯಂತಿಯನ್ನು ಸಮರ್ಥಿಸಲೂಇಲ್ಲ– ವಿರೋಧಿಸಲೂ ಇಲ್ಲ. ಇನ್ನೊಂದೆಡೆ, ಕೊಡವರು ಹಾಗೂ ಅಲ್ಪಸಂಖ್ಯಾತರ ಭಾವನೆಗಳಿಗೆ ಸೂಕ್ತ ಸ್ಪಂದನೆ ನೀಡಲೂ ವಿಫಲರಾದರು.

ಇದೇ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಶಾಸಕರು, ಸಂಸದರು ಹಿಂದೂಗಳನ್ನು ಒಟ್ಟು ಮಾಡುವ ಕೆಲಸ ಮಾಡಿದರು. ಟಿಪ್ಪು ಜಯಂತಿಯ ವಿರುದ್ಧ ಸ್ವಯಂ ಪ್ರೇರಿತ ಬಂದ್‌ಗೆ ಹಾಗೂ ಕರಾಳ ದಿನ ಆಚರಿಸಲು ಕರೆ ನೀಡಿದ್ದರು.

ಟಿಪ್ಪು ಜಯಂತಿಯ ಕಾರಣ ನಡೆದ  ಹಿಂಸಾಚಾರ ಹಾಗೂ ನಂತರ ನಡೆದ ಘಟನೆಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ದೇವಪಂಡ ಎಸ್‌. ಕುಟ್ಟಪ್ಪ, ಕನ್ನಂಡಬಾಣೆ ನಿವಾಸಿ ರಾಜು, ಗುಹ್ಯ ನಿವಾಸಿ ಶಾಹುಲ್‌ ಹಮೀದ್‌ ಬಲಿಯಾದರು. ಈ ಘಟನೆ ಇಡೀ ಜಿಲ್ಲೆಯಲ್ಲಿ ತಲ್ಲಣ ಮೂಡಿತು.

ಕೆಸರೆರಚಾಟ:  ಕೊಡವರ ವಿರೋಧ ಇದ್ದಾಗಲೂ ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಹಠ ತೊಟ್ಟಿದ್ದರಿಂದಲೇ ಸಾವು– ನೋವು ಸಂಭವಿಸಿತೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿಗರು, ಎಸ್‌ಡಿಪಿಐ ಪಕ್ಷದವರು, ‘ಜಯಂತಿ ದಿನದಂದು ಬಿಜೆಪಿ ಶಾಸಕರು, ಸಂಸದರು ಬಂದ್‌ಗೆ ಕರೆ ಕೊಟ್ಟಿದ್ದರಿಂದಲೇ ಹಿಂಸಾಚಾರ ಸಂಭವಿಸಿದೆ. ಇದಕ್ಕೆ ಬಿಜೆಪಿಯವರೇ ಕಾರಣ’ ಎಂದು ಪ್ರತ್ಯಾರೋಪಿಸಿದರು. ಒಟ್ಟಾರೆಯಾಗಿ ಈ ಘಟನೆಯಿಂದಾಗಿ ಮತಗಳು ಧರ್ಮ ಆಧಾರಿತವಾಗಿ ಧ್ರುವೀಕರಣಗೊಳ್ಳಲಿವೆ ಎನ್ನುವುದನ್ನು ತಳ್ಳಿಹಾಕಲಾಗದು.

ಕಾಂಗ್ರೆಸ್‌ ಅಸ್ತಿತ್ವಕ್ಕೆ ಧಕ್ಕೆ:  ಈ ಪ್ರಕರಣದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಆಘಾತ ಅನುಭವಿಸಿದರು. ಕಾಂಗ್ರೆಸ್ಸಿನ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಬಳಿ ದೂರಿಕೊಂಡರು. ಕಾಕತಾಳೀಯ ಎನ್ನುವಂತೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಟಿ. ಪ್ರದೀಪ್‌ ಈಗ ರಾಜೀನಾಮೆ ನೀಡಿದ್ದಾರೆ.

ಅಲ್ಪಸಂಖ್ಯಾತರ ಕೋಪ ಉಪಶಮನ ಮಾಡಲು ರಾಜ್ಯ ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ. ಅಲ್ಪಸಂಖ್ಯಾತ ವರ್ಗದ ಮುಖಂಡರನ್ನು ಕರೆಸಿ ಮಾತನಾಡುತ್ತಿದ್ದಾರೆ. ಅಲ್ಪಸಂಖ್ಯಾತರೂ ಸೇರಿ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಕರೆದೊಯ್ಯುವ ನಾಯಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ಅಹಿಂದಕ್ಕೆ ಮಣೆ?: ಸದ್ಯಕ್ಕೆ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಪಿ. ರಮೇಶ್‌ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರ ಅಹಿಂದ ಸರ್ಕಾರವೆಂದು ಈಚೆಗೆ ಘೋಷಿಸಿ ಕೊಂಡಿದ್ದರು. ಪೂರಕ ಎನ್ನುವಂತೆ ಹಿಂದೊಮ್ಮೆ ಜಿಲ್ಲೆಯಲ್ಲಿ ಅಹಿಂದ ಸಂಘಟಕರಾಗಿ ಗುರುತಿಸಿಕೊಂಡಿದ್ದ ಟಿ.ಪಿ. ರಮೇಶ್‌ ಅವರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪೂರ್ಣ ಪ್ರಮಾಣದ ಅಧ್ಯಕ್ಷರ ಆಯ್ಕೆಯು ಬಹುತೇಕ ಮಾರ್ಚ್‌ ವೇಳೆಗೆ ನಡೆಯಬಹುದು ಎನ್ನಲಾಗಿದೆ.  ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ ಅವರ ಜತೆ ಸ್ಪರ್ಧೆಗೆ ಇಳಿಯಲು ಸಮರ್ಥ ಮುಖಂಡನನ್ನು ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ವರಿಷ್ಠರ ಮಟ್ಟದಲ್ಲಿ ಚಿಂತನೆ ನಡೆದಿದೆ.

ಜೆಡಿಎಸ್‌ ನಿಷ್ಕ್ರಿಯ:  ಜೆಡಿಎಸ್‌ ಜಿಲ್ಲಾ ಘಟಕ ಅಧ್ಯಕ್ಷರಾಗಿದ್ದ ವಿ.ಪಿ. ಶಶಿಧರ್‌ ಕಾಂಗ್ರೆಸ್‌ಗೆ ಮರಳಿದ ನಂತರ ಜೆಡಿಎಸ್‌ ನಿಷ್ಕ್ರಿಯವಾಗಿದೆ. ಟಿಪ್ಪು ಜಯಂತಿ,  ಆ ನಂತರ ಪಕ್ಷದ ಮುಖಂಡರಾರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಜೆಡಿಎಸ್‌ ಜತೆ ಗುರುತಿಸಿಕೊಂಡಿದ್ದ ಅಲ್ಪಸಂಖ್ಯಾತ ಮುಖಂಡರು– ಮತದಾರರು ಈಗ ಅತಂತ್ರರಾಗಿದ್ದಾರೆ.

ಸದ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ಕಣದಲ್ಲಿದ್ದು, ಮುಂಬರುವ ಚುನಾವಣೆಗಳಲ್ಲಿ ನೇರ ಹಣಾಹಣಿ ನಡೆಯಲಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ಹಾಗೂ ಜಿಲ್ಲಾ– ತಾ.ಪಂ.ಗೆ ಚುನಾವಣೆಗಳು ಸದ್ಯದಲ್ಲಿ ನಡೆಯಲಿವೆ. ಈ ಹಂತದಲ್ಲಿ ಕಾಂಗ್ರೆಸ್‌ ಯಾವ ರೀತಿ ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

 

Prajavani

Leave a Reply

Your email address will not be published. Required fields are marked *

*