Home / News / Malnad / Kodagu / ಗಣೇಶ ಹಬ್ಬಕ್ಕೆ ಸಂಭ್ರಮದ ಸಿದ್ಧತೆ

ಗಣೇಶ ಹಬ್ಬಕ್ಕೆ ಸಂಭ್ರಮದ ಸಿದ್ಧತೆ

ಮಡಿಕೇರಿ: ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಪ್ರಮುಖವಾಗಿರುವ ಗೌರಿ– ಗಣೇಶ ಹಬ್ಬವು ಹೊಸ್ತಿಲಲ್ಲಿ ಬಂದುನಿಂತಿದೆ. ಗೌರಿ– ಗಣೇಶನನ್ನು ಕರೆತರಲು ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಒಗ್ಗೂಡಿಸಬೇಕೆನ್ನುವ ಉದ್ದೇಶದಿಂದ ಬಾಲಗಂಗಾಧರನಾಥ ತಿಲಕ್‌ ಅವರು ಪುಣೆಯಲ್ಲಿ ಆರಂಭಿಸಿದ ಗಣೇಶೋತ್ಸವ ಇಂದು ದೇಶದ ಮೂಲೆ ಮೂಲೆಯಲ್ಲಿ ಹರಡಿದೆ. ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.

ಆ. 28ರಂದು ಗೌರಿ ಹಾಗೂ ಆ. 29ರಂದು ಗಣೇಶನ ಮೂರ್ತಿಗಳನ್ನು ತಂದು ಪೂಜಿಸಲಾಗುತ್ತದೆ. ಒಂದು, ಮೂರು, ಏಳು, 11 ದಿನ ಹೀಗೆ ವಿವಿಧ ರೀತಿಯಲ್ಲಿ ಮೂರ್ತಿಯನ್ನು ಪೂಜಿಸಿ, ವಿಸರ್ಜಿಸಲಾಗುತ್ತದೆ.

ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ನಗರದ ಓಂಕಾರೇಶ್ವರ ದೇವಸ್ಥಾನದ ಬಳಿಯಿರುವ ಗೌರಿ ಕೆರೆಯನ್ನು ಗೊತ್ತು ಮಾಡಲಾಗಿದೆ. ಇದರ ಅಂಗವಾಗಿ ಕೆರೆಯನ್ನು ಶುಚಿಗೊಳಿಸಲಾಯಿತು. ಸ್ವಚ್ಛ ನೀರನ್ನು ತುಂಬಿಸಲಾಯಿತು. ಇದೇ ಕೆರೆಯಲ್ಲಿ ನಗರದ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ.

ಗಣೇಶ ಹಬ್ಬ ಆಚರಣೆ ಸಂದರ್ಭದಲ್ಲಿ ನಗರದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಹಾಗೂ ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸಬಾರದು ಎಂದು ನಗರಸಭೆ ಆಯುಕ್ತೆ ಪುಷ್ಪಾವತಿ ಮನವಿ ಮಾಡಿದ್ದಾರೆ.

ನಗರವನ್ನು ಈಗಾಗಲೇ ಪ್ಲಾಸ್ಟಿಕ್‌ ಮುಕ್ತವೆಂದು ಘೋಷಿಸಲಾಗಿರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸಿದರೆ ದಂಡ ವಿಧಿಸಲಾಗುವುದು ಎನ್ನುವ ಎಚ್ಚರಿಕೆಯನ್ನು ಕೂಡ ಅವರು ನೀಡಿದ್ದಾರೆ.

ಪೊಲೀಸರ ಸೂಚನೆಗಳು: ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ– ಗಣಪತಿ ಪ್ರತಿಷ್ಠಾಪನೆ ಸಂಬಂಧ ಸಾರ್ವಜನಿಕರಿಂದ ಬಲವಂತವಾಗಿ ಚಂದಾ ವಸೂಲು ಮಾಡಬಾರದು. ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ರೀತಿ ಪೆಂಡಾಲ್ ಅಥವಾ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು. ಸುಪ್ರೀಂಕೋರ್ಟ್‌ ಆದೇಶದಂತೆ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಯಾವುದೇ ರೀತಿ ಧ್ವನಿವರ್ಧಕ ಬಳಸಬಾರದು.

ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪ್ರತಿಷ್ಠಾಪನಾ ಸ್ಥಳ, ದಿನಾಂಕ ಮತ್ತು ಸಮಯ, ಪ್ರತಿಷ್ಠಾಪಿಸುವ ಜವಾಬ್ದಾರಿಯುತ ವ್ಯಕ್ತಿ ವಿವರ, ಕಾರ್ಯಕ್ರಮಕ್ಕೆ ಬರುವ ಭಕ್ತರ ಅಂದಾಜು ಸಂಖ್ಯೆ, ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದರೆ ಅದರ ವಿವರ, ವಿಸರ್ಜನೆಯ ದಿನಾಂಕ ಮತ್ತು ಸಮಯ, ಸ್ಥಳ, ವಿಸರ್ಜನೆಗೆ ಸೇರಬಹುದಾದ ಅಂದಾಜು ಭಕ್ತರ ಸಂಖ್ಯೆ, ಪ್ರತಿಷ್ಠಾಪನಾ ಸ್ಥಳಕ್ಕೆ ಸಂಬಂಧಿಸಿದವರಿಂದ, ವಿದ್ಯುತ್‌ ಇಲಾಖೆಯವರಿಂದ ಹಾಗೂ ದ್ವನಿವರ್ಧಕ ಬಳಸಲು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ಪಡೆದ ಅನುಮತಿ ಪತ್ರ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಠಾಣೆಗೆ ನೀಡಬೇಕು.

ಮೆರವಣಿಗೆ ವೇಳೆ ಮದ್ಯಪಾನ ಕಡ್ಡಾಯವಾಗಿ ನಿಷೇಧಿಸಿದೆ. ಕರ್ಕಶ ಶಬ್ದ ಹೊಮ್ಮಿಸುವ ಧ್ವನಿವರ್ಧಕ/ ಡಿಸ್ಕ್ ಜಾಕಿ ಸೌಂಡ್ ಸಿಸ್ಟಂ (ಡಿ.ಜೆ) ಬಳಸಬಾರದು. ಸಾರ್ವಜನಿಕ ಸ್ಥಳ, ಆಸ್ಪತ್ರೆ, ದೇವಸ್ಥಾನ, ಮಸೀದಿ, ಚರ್ಚ್‌ಗಳ 50 ಮೀಟರ್ ಸುತ್ತಲಿನ ಪ್ರದೇಶದಲ್ಲಿ ಸಿಡಿಮದ್ದುಗಳನ್ನು,
ಪಟಾಕಿಗಳನ್ನು ಸಿಡಿಸಬಾರದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

prajavani

Leave a Reply

Your email address will not be published. Required fields are marked *

*