Home / News / Malnad / Kodagu / ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಸಕ ಹೇಳಿಕೆ | ಶಿಕ್ಷಕರಿಂದ ಉತ್ತಮ ಪ್ರಜೆಗಳ ನಿರ್ಮಾಣ

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಸಕ ಹೇಳಿಕೆ | ಶಿಕ್ಷಕರಿಂದ ಉತ್ತಮ ಪ್ರಜೆಗಳ ನಿರ್ಮಾಣ

by malnadnews 9-6-14

 

ಮಡಿಕೇರಿ: ಶಿಕ್ಷಕ ವೃತ್ತಿಯು ಪಾಠ ಪ್ರವಚನ ಮಾಡುವುದಷ್ಟೇ ಅಲ್ಲ, ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊಂದಿದೆ. ಆದ್ದರಿಂದಲೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಯಾರೂ ಸಹ ಮರೆಯುವುದಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ರ ಆಶ್ರಯದಲ್ಲಿ ನಗರದ ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಕರ ದಿನವನ್ನು ಗುರು ಉತ್ಸವ ಎಂದು ಹೊಸ ಚಿಂತನೆಯೊಂದಿಗೆ ಆಚರಿಸಲು ಘೋಷಿಸಿದ್ದಾರೆ. ಪ್ರಧಾನಮಂತ್ರಿಯವರ ಆಲೋಚನೆ ಮತ್ತು ದೂರದೃಷ್ಟಿ ಬಹಳ ಅರ್ಥ ಮತ್ತು ಹಿನ್ನೆಲೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾತನಾಡಿ ದೇಶದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ. ಶಿಕ್ಷಕರು ಮಕ್ಕಳ ಪರಿಸ್ಥಿತಿಯನ್ನು ಅರಿತು ಪಾಠ ಪ್ರವಚನ ಮಾಡಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ,  ಶಾಲೆಗಳಲ್ಲಿ ಶಿಕ್ಷಕರು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಶಿಕ್ಷಕರು ಹೆಚ್ಚಿನ ಅಧ್ಯಯನ ಮಾಡಿ ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣವನ್ನು ನೀಡಬೇಕು. ಒಳ್ಳೆಯ ಶಿಕ್ಷಕರನ್ನು ಗುರುತಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಮಾತನಾಡಿ, ಮಕ್ಕಳಿಗೆ ಜೀವನ ಪಾಠವನ್ನು ಶಿಕ್ಷಕರು ಕಲಿಸಬೇಕು. ಹಾಗಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಆರ್. ಬಸವರಾಜ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಡಿ. ದೇವರಾಜು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸಿ.ಟಿ. ಸೋಮಶೇಖರ, ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಡಿ.ಎ. ಮೋಹನ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷರಾದ                         ಟಿ.ಡಿ. ರಮಾನಂದ, ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ. ಗೋಪಾಲ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಚಂಗಪ್ಪ, ಮಡಿಕೇರಿ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮೆಹಬೂಬ್ ಸಾಬ್ ಖಾನ್, ಮಡಿಕೇರಿ ತಾಲ್ಲೂಕು ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷರಾದ ವಿಲ್ಫ್ರೆಡ್ ಕ್ರಾಸ್ತಾ, ಶಿಕ್ಷಣಾಧಿಕಾರಿ ರಾಮಲಿಂಗಪ್ಪ ಇದ್ದರು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ:- ಪ್ರಾಥಮಿಕ ಶಾಲಾ ವಿಭಾಗದಿಂದ ವಿರಾಜಪೇಟೆ ತಾಲ್ಲೂಕು ಬಾಳೆಲೆಯ ಸ.ಮಾ.ಪ್ರಾ.ಶಾಲೆಯ ಕೆ.ಆರ್. ಸುಬ್ಬಯ್ಯ, ಸೋಮವಾರಪೇಟೆ ತಾಲ್ಲೂಕು ಸ.ಹಿ.ಪ್ರಾ.ಶಾಲೆ ಕೂಡ್ಲೂರು ಆರ್.ಬಸಮ್ಮ. ಮಡಿಕೇರಿ ತಾಲ್ಲೂಕು ಸ.ಹಿ.ಪ್ರಾ. ಶಾಲೆ, ಕಾರುಗುಂದ ವೈ.ಎ. ತಂಗಮ್ಮ, ಪ್ರೌಢಶಾಲಾ ವಿಭಾಗದಿಂದ ಮಕ್ಕಂದೂರು ಸರ್ಕಾರಿ ಪ್ರೌಢಶಾಲೆಯ ಸಿ.ಕೆ. ಉಷಾ,  ಕಾಕೋಟುಪರಂಬು  ಪ್ರೌಢಶಾಲೆ ಎಂ.ಕೆ. ರೋಹಿತ್ ಮತ್ತು  ಸುಂಟಿಕೊಪ್ಪ ಸ.ಪ.ಪೂ. ಕಾಲೇಜಿನ ಟಿ.ಜಿ. ಪ್ರೇಮಕುಮಾರ್ ಇವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಲಾಯಿತು.

prajavani

Leave a Reply

Your email address will not be published. Required fields are marked *

*