Home / News / Malnad / Kodagu / ದಸರಾ: ಮೊದಲ ಲೆಕ್ಕಪತ್ರ ವರದಿ ಸಲ್ಲಿಕೆ

ದಸರಾ: ಮೊದಲ ಲೆಕ್ಕಪತ್ರ ವರದಿ ಸಲ್ಲಿಕೆ

ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಬೇಕೆಂದು ರಾಜ್ಯ ಸರ್ಕಾರ ಕಳೆದ ಕೆಲ ವರ್ಷಗಳಿಂದ ಅನುದಾನ ನೀಡುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ದಸರಾ ಸಮಿತಿಯು 2013ರಲ್ಲಿ ನಡೆದ ಉತ್ಸವದ ಖರ್ಚುವೆಚ್ಚದ ಬಗ್ಗೆ ಲೆಕ್ಕಪತ್ರವನ್ನು (ಆಡಿಟ್‌ ವರದಿ) ಜಿಲ್ಲಾಡಳಿತಕ್ಕೆ ಸಲ್ಲಿಸಿದೆ.

ಹಿಂದಿನ ವರ್ಷ ಸರ್ಕಾರವು ರೂ 75 ಲಕ್ಷ ಅನುದಾನ ನೀಡಿತ್ತು. ಇದರ ಜತೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವೂ ಸೇರಿದಂತೆ 10 ದಿನಗಳ ಉತ್ಸವಕ್ಕಾಗಿ ಒಟ್ಟು ರೂ 91,31,711 ವೆಚ್ಚ ಮಾಡಲಾಗಿದೆ. ಲೆಕ್ಕಪರಿಶೋಧಕರಿಂದ ಅನುಮೋದನೆ ಪಡೆದ ವೆಚ್ಚದ ವಿವರವನ್ನು ಮಂಡಿಸಲಾಗಿದೆ ಎಂದು ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ  ಕೆ.ಎಂ. ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಸಲದ ದಸರಾ ಉತ್ಸವವನ್ನು ಅದ್ದೂರಿಯಿಂದ ಆಚರಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ನಾವು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ ರೂ 25 ಲಕ್ಷ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಲದ ಖರ್ಚುವೆಚ್ಚಗಳನ್ನು ನಾವು ವೆಬ್‌ಸೈಟ್‌ನಲ್ಲಿ ಹಾಕಲಿದ್ದು (www.madikeridasara.com), ಸಾರ್ವಜನಿಕರು ಕೂಡ ಇದನ್ನು ವೀಕ್ಷಿಸಬಹುದು’ ಎಂದು ಹೇಳಿದರು.

ಅನುದಾನದ ಷರತ್ತುಗಳು 
ಸರ್ಕಾರವು ಅನುದಾನ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮೂರು ಷರತ್ತುಗಳನ್ನು ವಿಧಿಸಿದೆ. 1) ಯಾವ ಉದ್ದೇಶಕ್ಕೆ ಹಣ ಮಂಜೂರು ಮಾಡಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು. 2) ಬಿಡುಗಡೆ ಮಾಡಿದ ಅನುದಾನ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಉಪಯುಕ್ತತಾ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು. 3) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ  1999– 2000 ನಿಯಮವನ್ನು ಪಾಲಿಸಬೇಕು ಎಂದು ಸರ್ಕಾರದ ಆದೇಶದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನವೀಕರಣ ಆಗಿಲ್ಲ 
ಮಡಿಕೇರಿ ನಗರ ದಸರಾ ಸಮಿತಿಯ ನೋಂದಣಿಯನ್ನು 18 ವರ್ಷಗಳಿಂದ ನವೀಕರಣ ಮಾಡಿಸಲಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ದಸರಾ ಉತ್ಸವವನ್ನು ಅದ್ದೂರಿಯಿಂದ ಆಚರಿಸಬೇಕು ಎನ್ನುವ ಉದ್ದೇಶದಿಂದ ರಚಿಸಲಾಗಿದ್ದ ಸಮಿತಿಯನ್ನು  1987ರ ಮೇ 4ರಂದು ನೋಂದಣಿ ಮಾಡಲಾಗಿತ್ತು.

ಪ್ರತಿ ವರ್ಷ ನವೀಕರಣಗೊಳ್ಳಬೇಕಾಗಿದ್ದ ಈ ಸಮಿತಿಯು 1995– 96ರ ನಂತರ ನವೀಕರಣಗೊಂಡಿಲ್ಲ. ಅಲ್ಲದೇ, ಈ ಅವಧಿಯ ನಂತರ ಯಾವುದೇ ಲೆಕ್ಕಪತ್ರಗಳನ್ನು ತಮಗೆ ಸಲ್ಲಿಸಿಲ್ಲ ಎಂದು ಜಿಲ್ಲಾ ನೋಂದಣಾಧಿಕಾರಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ.

‘ಕಳೆದ ವರ್ಷದ ಖರ್ಚಿನ ವಿವರ’
ಕರಗಗಳಿಗೆ ಅನುದಾನ ರೂ 5 ಲಕ್ಷ, ದಶಮಂಟಪಗಳಿಗೆ ರೂ 25 ಲಕ್ಷ, ಗಾಂಧಿಮಂಟಪ ಶಾಮಿಯಾನ ಮತ್ತು ಗ್ಯಾಲರಿ ನಿರ್ಮಾಣ, ಕಾವೇರಿ ಕಲಾಕ್ಷೇತ್ರ ದೀಪಾಲಂಕಾರ, ನಗರ ದೀಪಾಲಂಕಾರದ ಖರ್ಚು ರೂ 24,94,750, ದಸರಾ ಕವಿಗೋಷ್ಠಿ ಖರ್ಚು ರೂ 1 ಲಕ್ಷ, ಸಾಂಸ್ಕೃತಿಕ ಕಾರ್ಯಕ್ರಮ ರೂ 6.25 ಲಕ್ಷ, ಯುವದಸರಾ ರೂ 2 ಲಕ್ಷ, ಪದಕ ಮತ್ತು ಬಹುಮಾನ ರೂ 4.50 ಲಕ್ಷ, ಸಿ.ಸಿ ಕ್ಯಾಮೆರಾ ಅಳವಡಿಕೆ ಮತ್ತು  ಸುರಕ್ಷತಾ ಖರ್ಚು ರೂ 85 ಸಾವಿರ, ಸಂಗೀತ ರಸಮಂಜರಿ ರೂ 8 ಲಕ್ಷ, ದಸರಾ ಕ್ರೀಡಾಕೂಟದ ಖರ್ಚು ರೂ 1.50 ಲಕ್ಷ, ಮುದ್ರಣ ಖರ್ಚು ರೂ 46 ಸಾವಿರ, ಜೆರಾಕ್ಸ್‌, ಟೈಪಿಂಗ್‌ ಹಾಗೂ ಲೇಖನಿ ಖರ್ಚು ರೂ 25,684, ಜಾಹೀರಾತು ಶುಲ್ಕ ಪಾವತಿ ರೂ 1,90,853, ಭಿತ್ತಿಪತ್ರ, ಸ್ವಾಗತ ಕಮಾನು ನಿರ್ಮಾಣಕ್ಕೆ ರೂ 87 ಸಾವಿರ, ವಸತಿಗೃಹಗಳ ಬಾಡಿಗೆ ರೂ 1,16,000, ಬೆಂಗಳೂರಿಗೆ ಹೋದ ನಿಯೋಗದ ಖರ್ಚು ರೂ 1,09,250, ಅತಿಥಿಗಳ ಊಟದ ಖರ್ಚು  ರೂ 1,10,000, ವಿವಿಧ ದೇವಾಲಯಗಳಲ್ಲಿ ಪೂಜಾ ಖರ್ಚು ರೂ 10,000, ದಶಮಂಟಪ ಅಧ್ಯಕ್ಷರ ಗೌರವಧನ ರೂ 20,000, ವಾಹನ ಬಾಡಿಗೆ ರೂ 62,400, ಹೂ ಮತ್ತು ಹೂವಿನ ಹಾರಗಳು       ರೂ 44,388, ಲೆಕ್ಕಪತ್ರ ತಪಾಸಣಾ ಶುಲ್ಕ ರೂ 10,000, ದೂರವಾಣಿ ಖರ್ಚು ರೂ 1,571, ಕಾವೇರಿ ಭಕ್ತಮಂಡಳಿಗೆ ದೇಣಿಗೆ ರೂ 20 ಸಾವಿರ, ದುರಸ್ತಿ, ಸ್ವಚ್ಛತೆ ಹಾಗೂ ತಾತ್ಕಾಲಿಕ ಶೌಚಾಲಯ ರೂ 13,500, ಸಿಬ್ಬಂದಿಗೆ ಗೌರವ ಧನ ರೂ 30 ಸಾವಿರ, ವೆಬ್‌ಸೈಟ್‌ ನಿರ್ಮಾಣಕ್ಕೆ   ರೂ 10 ಸಾವಿರ, ಫೋಟೊ ಅಲ್ಬಂ ರೂ 10ಸಾವಿರ, ಪೌರಕಾರ್ಮಿಕರ ಊಟದ ಖರ್ಚು ರೂ 5 ಸಾವಿರ, ವೇದಿಕೆ ಸಾಮಗ್ರಿಗಳು ರೂ 20 ಸಾವಿರ, ಇತರೆ ಖರ್ಚು (ಸ್ವಾಗತ್‌ ಡೆಕೊರೆಟರ್ಸ್‌) ರೂ 28,350 ದಸರಾ ಸಮಿತಿಯ ಕಾಫಿ– ತಿಂಡಿ ಖರ್ಚು ರೂ 18,249, ಮಂಗಳ ವಾದ್ಯ ರೂ 5 ಸಾವಿರ, ಮಹಿಳಾ ದಸರಾ ರೂ 78,066 ಶಿವಕುಮಾರ್‌ ಕುಟುಂಬಕ್ಕೆ ಧನಸಹಾಯ  ರೂ 10 ಸಾವಿರ, ಮಳಿಗೆ  ರೂ 27,400, ಅತಿಥಿಗಳ ಗೌರವಧನ ರೂ 30,000, ಇ.ಎಂ.ಡಿ ಮರುಪಾವತಿ ರೂ 23,250, ನೆನಪಿನ ಕಾಣಿಕೆ ರೂ 65,000, ಒಟ್ಟು ರೂ 91,31,711.

Prajavani

Leave a Reply

Your email address will not be published. Required fields are marked *

*