Home / Kannada / ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ

ಪ್ರವಾಹದಲ್ಲಿ ಸಿಲುಕಿದ್ದ 8 ಜನರ ರಕ್ಷಣೆ

ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಿಂದ ಕಲಬುರ್ಗಿಯಲ್ಲಿ ಸುರಿಯುತ್ತಿದ್ದ ಮಳೆಯ ಆರ್ಭಟ ಶನಿವಾರ ತಗ್ಗಿದೆ. ಪ್ರವಾಹದಲ್ಲಿ ಸಿಲುಕಿದ್ದ 8 ಜನರನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಕಲಬುರ್ಗಿ: ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯ ಆರ್ಭಟ ಶನಿವಾರ ತಗ್ಗಿದೆ. ಪ್ರವಾಹದಲ್ಲಿ ಸಿಲುಕಿದ್ದ 8 ಜನರನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಚಿತ್ತಾಪುರ ತಾಲ್ಲೂಕು ಶಹಾಬಾದ ಸಮೀಪದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಶಂಕರವಾಡಿಯ ಐವರು ಮರಗಳ ಮೇಲೆ ಆಶ್ರಯ ಪಡೆದಿದ್ದರು. ಈ ಮಾಹಿತಿ ತಿಳಿದ ಗ್ರಾಮಸ್ಥರು ಪೊಲೀಸರ ನೆರವಿನೊಂದಿಗೆ ಹಗ್ಗದ ಮೂಲಕ ನೀರಿಗೆ ಇಳಿದು ನಿಂಗಣ್ಣ, ಬಸವರಾಜ, ಶೇಖಮ್ಮ, ಸಂಗಮ ಹಾಗೂ ಆಕಾಶನನ್ನು ಅಪಾಯದಿಂದ ಪಾರು ಮಾಡಿದರು.

ಸೇಡಂ ತಾಲ್ಲೂಕಿನ ಮಳಖೇಡ ಸೇತುವೆ ಮೇಲಿಂದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಲಾರಿ ಚಾಲಕನನ್ನು ರಕ್ಷಣಾ ತಂಡ ಬೆಳಗಿನ ಜಾವ 2 ಗಂಟೆಗೆ ಕಾರ್ಯಾಚರಣೆ ನಡೆಸಿ ರಕ್ಷಿಸಿತು. ಗುಂಡಗುರ್ತಿ ಗ್ರಾಮದ ಬಳಿ ಬೆಳಗಿನ 3 ಗಂಟೆಗೆ ಸೇತುವೆ ದಾಟಲು ಯತ್ನಿಸಿ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರನ್ನು ವಿಪತ್ತು ನಿರ್ವಹಣಾ ತಂಡ ರಕ್ಷಿಸಿತು.

ಜಿಲ್ಲೆಯ ಎಲ್ಲಾ ಜಲಾಶಯ, ನದಿ, ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ಕಾಗಿಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನದಿ ಪಾತ್ರಗಳ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಣ್ಣೆತೊರಾ ಜಲಾಶಯದಿಂದ 28,472 ಕ್ಯುಸೆಕ್, ಕೆಳದಂಡೆ ಮುಲ್ಲಾಮಾರಿಯಿಂದ 27,560 ಕ್ಯುಸೆಕ್, ಗಂಡೋರಿ ನಾಲಾದಿಂದ 6,823 ಕ್ಯುಸೆಕ್ ಹಾಗೂ ಚುಳಕಿ ನಾಲಾದಿಂದ 4,382 ಕ್ಯುಸೆಕ್ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ.

ಮಳೆಯಿಂದ ತೊಗರಿ, ಹೆಸರು ಮತ್ತು ಉದ್ದು ಬೆಳೆಗಳಿಗೆ ಜೀವ ಕಳೆ ಬಂದಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

courtesy:pv

Leave a Reply

Your email address will not be published. Required fields are marked *

*