Home / News / India / ಮೋದಿ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣ

ಮೋದಿ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣ

ಆರೆಸ್ಸೆಸ್‌ನ ರಹಸ್ಯ ಅಜೆಂಡಾ: ರಾಯ್ಟರ್ಸ್ ವರದಿ
ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಿಂದ ಆರಂಭಿಸಿ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಕಾರ್ಯಸಾಧನೆಯ ಗುರಿ
ಕೋಲ್ಕತಾ, ಅ.13: ಭಾರತವು ಹಿಂದೂ ರಾಷ್ಟ್ರವೆಂಬುದಾಗಿ ಮುಸ್ಲಿಮರು ಮತ್ತು ಕ್ರೈಸ್ತರು ಒಪ್ಪಿಕೊಳ್ಳುವಂತೆ ಮಾಡುವುದು ಆರೆಸ್ಸೆಸ್‌ನ ಗೂಢಾಲೋಚನೆಯಾಗಿದೆ. ತನ್ನ ಈ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಅದು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಕೆಲವರ ಮೇಲೆ ಮತಾಂತರದ ಒತ್ತಡ ಹೇರುತ್ತಿದೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣೆಯು ಆರೆಸ್ಸೆಸ್‌ನ ಈ ರಹಸ್ಯ ಅಜೆಂಡಾದ ಮೊದಲ ಗುರಿಯಾಗಿದೆಯೆಂದು ಅಮೆರಿಕದ ಸುದ್ದಿಸಂಸ್ಥೆ ರಾಯ್ಟರ್ಸ್‌ನ ವಿಶೇಷ ವರದಿಯೊಂದು ಬಹಿರಂಗಪಡಿಸಿದೆ.

ತನ್ನ ಗುರಿ ಸಾಧನೆಯಲ್ಲಿ ಆರೆಸ್ಸೆಸ್‌ನ ತಂತ್ರಗಾರಿಕೆ ಹೀಗಿದೆ: ಆದಷ್ಟು ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು. ತನ್ಮೂಲಕ ಹಿಂದೂವಿಗೆ ಪ್ರಥಮ ಆದ್ಯತೆಯೆಂಬ ಸಿದ್ಧಾಂತವನ್ನು ದೇಶಾದ್ಯಂತ ಪ್ರಚು ರಪಡಿಸುವುದು. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಗೆಲುವಿನಲ್ಲಿ ಆರೆಸ್ಸೆಸ್‌ನ ಸ್ವಯಂಸೇವಕರ ಪಾತ್ರ ಮಹತ್ವದ್ದಾಗಿದೆ.
ಸ್ವತಃ ನರೇಂದ್ರ ಮೋದಿ ತನ್ನ ಯೌವನದ ದಿನಗಳಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದವರು ಎಂಬುದು ಗಮನಾರ್ಹವಾಗಿದೆ.
ಲೋಕಸಭೆಯಲ್ಲಿ ಬಿಜೆಪಿ ಭಾರೀ ಬಹುಮತವನ್ನು ಹೊಂದಿದ್ದರೂ, ರಾಜ್ಯಸಭೆಯಲ್ಲಿ ಪಕ್ಷವು ಬಹುಮತದ ಕೊರತೆಯನ್ನು ಎದುರಿಸುತ್ತಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದ 31 ವಿಧಾನಸಭೆಗಳ ಪೈಕಿ ಕಡೇಪಕ್ಷ 20ರಲ್ಲಿ ಬಿಜೆಪಿ ಆಡಳಿತ ನಡೆಸಬೇಕು ಎಂಬುದು ಆರೆಸ್ಸೆಸ್ ಮತ್ತು ಬಿಜೆಪಿಯ ಕಾರ್ಯತಂತ್ರವಾಗಿದೆ ಎಂದು ಪಕ್ಷ ಉನ್ನತ ಮೂಲಗಳು ತಿಳಿಸಿವೆ.
ಸದ್ಯ, 11 ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ ಇಲ್ಲವೇ ಅಧಿಕಾರ ಹಂಚಿಕೊಂಡಿದೆ.
ಆರೆಸ್ಸೆಸ್  ಮತ್ತು ಬಿಜೆಪಿಗಳ ಎರಡು ಡಜನ್‌ಗಳಿಗೂ ಮಿಕ್ಕಿ ಧುರೀಣರು ಮತ್ತು ಪದಾಧಿಕಾರಿಗಳ ಜೊತೆಗೆ ನಡೆಸಿದ ಸಂದರ್ಶನ ಹಾಗೂ ಆರೆಸ್ಸೆಸ್‌ನ ರಹಸ್ಯ ಸಭೆಗಳಿಂದ ಲಭಿಸಿದ ಮಾಹಿತಿಗಳ ಪ್ರಕಾರ, ಎರಡು ಹಂತಗಳ ತಂತ್ರಗಾರಿಕೆಯನ್ನು ರೂಪಿಸಲಾಗಿದೆ. ಲೋಕಸಭೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಹಂತವನ್ನು ದಾಟಲಾಗಿದೆ. ರಾಜ್ಯ ವಿಧಾನಸಭೆಗಳಲ್ಲಿ ಇದೇ ಬಗೆಯ ಯಶಸ್ಸನ್ನು ಇನ್ನು ಸಾಧಿಸಬೇಕು.
‘ಎಲ್ಲ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು. ಇದರಿಂದ ಮಾತ್ರ ದೇಶದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಬದಲಾವಣೆಗಳು ಸಾಧ್ಯ. 2014ರ ಲೋಕಸಭೆ ಚುನಾವಣೆಯ ಗೆಲುವು ಈ ದೀರ್ಘಾವಧಿಯ ಗುರಿ ಸಾಧನೆಯಲ್ಲಿ ಆರಂಭವೆಂದು ಪರಿಗಣಿಸಬೇಕು’ ಎಂದು ಆರೆಸ್ಸೆಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ರಾಜಕೀಯ ಪ್ರಭಾವ: ಸರಕಾರದ ಮಾತು ಮತ್ತು ಕೃತಿಗಳಲ್ಲಿ (ನಿರ್ಧಾರಗಳು) ಆರೆಸ್ಸೆಸ್ ಪ್ರಭಾವ ಎದ್ದು ಕಾಣುತ್ತಿದೆ. ಒಂದು ಕಾಲದಲ್ಲಿ ಬಲಪಂಥೀಯ ಸಂಘಟನೆ ಎಂಬ ತಾತ್ಸಾರ ಹೊಂದಿದ್ದ ಆರೆಸ್ಸೆಸ್ ಇಂದು ಬಿಜೆಪಿಯ ತತ್ವ ಸಿದ್ಧಾಂತಗಳ ಪ್ರಧಾನ ಪೋಷಕನಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಆರೆಸ್ಸೆಸ್
ನ ಬೆಂಬಲಿಗರನ್ನು ಪ್ರಮುಖ ಸ್ಥಾನಮಾನಗಳಿಗೆ ಮೋದಿ ಸರಕಾರ ನೇಮಕಗೊಳಿಸುತ್ತಿದೆ. ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆಯ ಅಧ್ಯಕ್ಷ ಸ್ಥಾನ, ಭಾರತೀಯ ಇತಿಹಾಸ ಸಂಶೋಧನಾ ಮಂಡಳಿಯ ಅಧ್ಯಕ್ಷ ಸ್ಥಾನ ಮತ್ತು ‘ಸೆಬಿ’ ಆಡಳಿತ ಮಂಡಳಿಯ ಸದಸ್ಯರು ಈ ದಿಸೆಯಲ್ಲಿ ಕೆಲವು ಮಹತ್ವದ ಉದಾಹರಣೆಗಳಾಗಿವೆ.
ಕೇಂದ್ರ ಸಚಿವ ಸಂಪುಟದ ಬಹುತೇಕ ಸಚಿವರ ರಾಜಕೀಯ ಪ್ರಜ್ಞೆ ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳಿಂದ ರೂಪುಗೊಂಡಿವೆ. ಸ್ವತಃ ಪ್ರಧಾನಿ ಆರೆಸ್ಸೆಸ್‌ನ ಪೂರ್ಣಾವಧಿಯ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ತನ್ನ ಕರ್ತವ್ಯಪ್ರಜ್ಞೆ, ಶಿಸ್ತು ಮತ್ತು ಯಶಸ್ಸಿಗೆ ಆರೆಸ್ಸೆಸ್ ಕಾರಣವೆಂದು ಅವರು ಹೇಳುತ್ತಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಂಪುಟದ ಏಳು ಮಂದಿ ಸದಸ್ಯರು ತಮ್ಮ ಯೌವನದ ದಿನಗಳನ್ನು ಆರೆಸ್ಸೆಸ್‌ನಲ್ಲೇ ಕಳೆದವರಾಗಿದ್ದಾರೆ. ಗೃಹ ಸಚಿವ ರಾಜ್‌ನಾಥ್ ಸಿಂಗ್ ಒಂದು ಕಾಲದಲ್ಲಿ ಆರೆಸ್ಸೆಸ್‌ನ ಪದಾಧಿಕಾರಿಯಾಗಿದ್ದವರು. ಆ ನಂತರದ ದಿನಗಳಲ್ಲಿ ಬಿಜೆಪಿ ಅಧ್ಯಕ್ಷರಾದವರು. ಈಗ ದೇಶಾದ್ಯಂತ ಗೋಹತ್ಯೆ ನಿಷೇಧ ಜಾರಿಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಕಳೆದು ಹೋಗಿದೆ ಎನ್ನಲಾಗುತ್ತಿರುವ ಸರಸ್ವತಿ ನದಿಯ ಪತ್ತೆಯಂತೆ ಗೋಹತ್ಯೆ ನಿಷೇಧ ಕೂಡ ಆರೆಸ್ಸೆಸ್‌ಗೆ ಬಹಳ ಪ್ರೀತಿಪಾತ್ರವಾದ ವಿಷಯವಾಗಿದೆ. ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿ ಸರಸ್ವತಿ ನದಿಯ ಪ್ರಸ್ತಾಪ ಬರುತ್ತದೆ. ಈ ನದಿಯ ಪತ್ತೆ ಮಾಡುವಂತೆ ಸರಕಾರದ ಪುರಾತತ್ವಶಾಸ್ತ್ರಜ್ಞರಿಗೆ ಆದೇಶ ಹೋಗಿದೆ. ಈ ನದಿಯು ಅಸ್ತಿತ್ವದಲ್ಲಿದ್ದ ಬಗ್ಗೆ ಸಾಕ್ಷಾಧಾರಗಳು ಲಭಿಸಿದಲ್ಲಿ, ಮುಸ್ಲಿಮ್ ಮತ್ತು ಕ್ರೈಸ್ತ ಮತಾವಲಂಬಿಗಳ ದಾಳಿಗೆ ಮೊದಲಿದ್ದ ಹಿಂದೂಗಳ ಸುವರ್ಣಯುಗದ ಕಥೆಗೆ ಬಲ ಲಭಿಸಿದಂತಾಗುತ್ತದೆ ಎಂದು ಆರೆಸ್ಸೆಸ್ ಮುಖಂಡರು ಭಾವಿಸುತ್ತಾರೆ.
ಭಾರತದ ಸುವರ್ಣಯುಗ: ಭಾರತದ ಆತ್ಮಕ್ಕಾಗಿ ತೆರೆಮರೆಯ ಹೋರಾಟ ನಡೆಯುತ್ತಿರುವುದಂತೂ ಸ್ಪಷ್ಟ. 1947ರ ಸ್ವಾತಂತ್ರದ ನಂತರ ಕಾಂಗ್ರೆಸ್ ಮತ್ತು ಅದರ ಎಡಪಂಥೀಯ ಅಂಗಪಕ್ಷಗಳು ದೇಶದ ರಾಜಕೀಯ ರಂಗವನ್ನು ಆಳುತ್ತಾ ಬಂದಿವೆ. ಜಾತ್ಯತೀತ ತತ್ತ್ವ, ಬಹು ಮತಾವಲಂಬಿಗಳನ್ನು ಒಳಗೊಂಡ ದೇಶವೊಂದರ ಕಲ್ಪನೆಯನ್ನು ಈ ರಾಜಕೀಯ ಪಕ್ಷಗಳು ಬೆಳೆಸುತ್ತ ಬಂದಿವೆ. ಹಿಂದೂಗಳು ಬಹುಸಂಖ್ಯಾತರಾದರೂ, ದೇಶದ 120 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇಕಡಾ 14ರಷ್ಟು ಪಾಲು ಹೊಂದಿದ್ದಾರೆ ಎಂಬುದು ಗಮನಾರ್ಹವಾಗಿದೆ.
ಹಿಂದೂಸ್ಥಾನ ಎಂದರೆ, ಹಿಂದೂಗಳ ಮಾತೃಭೂಮಿ. ಹೀಗಾಗಿ, ಇಲ್ಲಿ ವಾಸಿಸುತ್ತಿರುವ ಎಲ್ಲರೂ ಮೊದಲು ಹಿಂದೂ ಎನಿಸಿಕೊಳ್ಳುತ್ತಾರೆ ಎಂದು ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯೆಜೀ ಜೋಶಿ ಹೇಳುತ್ತಾರೆ.
ಹೊಸ ಕಾರ್ಯತಂತ್ರ: ಕೆಲವು ವರ್ಷಗಳ ಹಿಂದೆ, ಚುನಾವಣೆಯ ಕಣದ ಹೊರಗಿನಿಂದ ತನ್ನ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಸಾಧಿಸಲು ಆರೆಸ್ಸೆಸ್ ಪ್ರಯತ್ನ ನಡೆಸಿತ್ತು. 2013ರ ಜುಲೈಯಲ್ಲಿ ಬದಲಾವಣೆ ಬಂತು. ಆರೆಸ್ಸೆಸ್‌ನ ಅಮರಾವತಿ ಸಮಾವೇಶದಲ್ಲಿ ಸಂಘಟನೆಯ ಧುರೀಣರು ತಮ್ಮ ನೀತಿಯಲ್ಲಿ ಬದಲಾವಣೆಯ ನಿರ್ಧಾರವನ್ನು ಕೈಗೊಂಡರು. ಬಿಜೆಪಿಯನ್ನು ಅಧಿಕಾರಕ್ಕೆ ತರುವ ದಿಸೆಯಲ್ಲಿ ಆರೆಸ್ಸೆಸ್‌ನ ಸಂಘಟನೆಯ ಜಾಲವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು ಎನ್ನುತ್ತಾರೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಆರೆಸ್ಸೆಸ್‌ನ ಪ್ರಚಾರಕರಾಗಿರುವ ರಾಮಪದ ಪಾಲ್. ಅವರ ಈ ಮಾತುಗಳನ್ನು ಅಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಆರೆಸ್ಸೆಸ್ ಮತ್ತು ಬಿಜೆಪಿಯ ಹಲವು ಧುರೀಣರು ಖಚಿತಪಡಿಸಿದ್ದಾರೆ.
ಅಮರಾವತಿ ಸಮಾವೇಶದನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 2014ರ ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಆರೆಸ್ಸೆಸ್ ಕಾರ್ಯಕರ್ತರನ್ನು ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು. ಲೋಕಸಭೆಯ 543 ಸ್ಥಾನಗಳ ಪೈಕಿ 80 ಸ್ಥಾನಗಳು ಉತ್ತರ ಪ್ರದೇಶದಲ್ಲಿವೆ ಎಂಬ ಕಾರಣದಿಂದ ಈ ರಾಜ್ಯವು ಚುನಾವಣೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೂ 100 ಹೆಸರುಗಳನ್ನು ಒಳಗೊಂಡ ಮತದಾರ ಪಟ್ಟಿಯನ್ನು ನೀಡಲಾಯಿತು. ‘ಪನ್ನಾ ಪ್ರಭಾರಿಗಳು’ ಎಂದು ಕರೆಯಲಾಗುವ ಈ ಕಾರ್ತಕರ್ತರು ಮತದಾರರನ್ನು ಬಿಜೆಪಿಯತ್ತ ಓಲೈಸುವುದು ಮತ್ತು ಅವರನ್ನು ಮತದಾನ ಕೇಂದ್ರಗಳಿಗೆ ಕರೆದೊಯ್ಯುವ ಕೆಲಸ ಮಾಡಿದರು. ಈ ಪ್ರಯತ್ನದ ಫಲವಾಗಿ ಬಿಜೆಪಿ ರಾಜ್ಯದ 71 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು.
ಮುಂಬರುವ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಇದೇ ಬಗೆಯ ಮ್ಯಾಜಿಕ್ ಮಾಡುವ ಆಶಾಭಾವನೆಯನ್ನು ಆರೆಸ್ಸೆಸ್ ಮತ್ತು ಬಿಜೆಪಿ ಹೊಂದಿವೆ. ಈಗ, ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಬಿಜೆಪಿಯ ಪರವಾಗಿ ತಳ ಮಟ್ಟದ ಪ್ರಚಾರವನ್ನು ಕೈಗೊಂಡಿದ್ದಾರೆ.
ಅಗ್ನಿ ಪರೀಕ್ಷೆ: ಆದರೆ, ಮುಂದಿನ ವರ್ಷದ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ ಎಂಬುದು ಆರೆಸ್ಸೆಸ್-ಬಿಜೆಪಿ ಪಾಲಿಗೆ ಅಗ್ನಿ ಪರೀಕ್ಷೆಯಾಗಿದೆ. ಹಲವಾರು ದಶಕಗಳಿಂದ ಎಡಪಕ್ಷಗಳು ಮತ್ತು ಎಡಪಂಥೀಯ ನಿಲುವಿನ ರಾಜಕೀಯ ಪಕ್ಷಗಳ ಆಳ್ವಿಕೆ ಕಂಡಿರುವ ಈ ರಾಜ್ಯದಲ್ಲಿ ಬಿಜೆಪಿ ಬಹಳ ದುರ್ಬಲವಾದ ಸಂಘಟನೆಯನ್ನು ಹೊಂದಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂಬಂಧವಾಗಿ, ಈ ವರ್ಷದಲ್ಲಿ ಕಡೇಪಕ್ಷ ಐದು ಬಾರಿ ಆರೆಸ್ಸೆಸ್ ಧುರೀಣರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆಗೆ ಸಭೆ ನಡೆಸಿದ್ದಾರೆ. ದೇಶದ ಈಶಾನ್ಯ ರಾಜ್ಯಗಳಲ್ಲಿ ರಾಜಕೀಯ ಹಿಡಿತವನ್ನು ಸಾಧಿಸುವ ದಿಸೆಯಲ್ಲಿ ಪಶ್ಚಿಮ ಬಂಗಾಳವು ಬಿಜೆಪಿಗೆ ಮಹಾದ್ವಾರ ಇದ್ದಂತೆ ಎಂದು ಅಮಿತ್ ಶಾ ಈ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಧಾರ್ಮಿಕ ಗಲಭೆ: ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಕೋಮು ಹಿಂಸಾಚಾರಗಳು ಹೊಸದೇನೂ ಅಲ್ಲ. ತೀರಾ ಇತ್ತೀಚೆಗೆ 2007, 2010 ಮತ್ತು 2013ರಲ್ಲಿ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳು ಸಂಭವಿಸಿವೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಗೆಲುವಿನ ಆರಂಭದ ದಿನಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಅಧಿಕೃತವಾಗಿ ಘೋಷಣೆ ಮಾಡಬೇಕೆಂಬ ಒತ್ತಾಯ ಹಿಂದೂ ಸಂಘಟನೆಗಳಿಂದ ಕೇಳಿಬಂದಿತ್ತು. ‘ಲವ್-ಜಿಹಾದ್’ ಹೆಸರಿನಲ್ಲಿ ಹಿಂದೂ-ಮುಸ್ಲಿಂ ದಂಪತಿಯ ವಿರುದ್ಧ ಆಂದೋಲನವೊಂದನ್ನು ಆರಂಭಿಸಲಾಗಿತ್ತು. ‘ಘರ್ ವಾಪಸಿ’ ಮೂಲಕ ಮುಸ್ಲಿಮರು ಮತ್ತು ಕ್ರೈಸ್ತರನ್ನು ಮರು ಮತಾಂತರಗೊಳಿಸುವ ಪ್ರಯತ್ನಗಳು ನಡೆದಿದ್ದವು. ಇವೆಲ್ಲವೂ ಆರೆಸ್ಸೆಸ್‌ಗೆ ಬಹಳ ಪ್ರಿಯವಾದ ವಿಷಯಗಳೇ ಆಗಿವೆ. ಈಗ, ಗೋಹತ್ಯೆ ಎಂಬ ಇನ್ನೊಂದು ಕೋಮು ಗಲಭೆಯ ಅಸ್ತ್ರವನ್ನು ಆರೆಸ್ಸೆಸ್-ಬಿಜೆಪಿಯು ಎತ್ತಿಕೊಂಡಿವೆ. ಉತ್ತರ ಪ್ರದೇಶದ ದಾದ್ರಿಯಲ್ಲಿ ಮುಸ್ಲಿಂ ಕುಟುಂಬವೊಂದರ ಮುಖ್ಯಸ್ಥನನ್ನು ಇದೇ ಕಾರಣದಿಂದ ಹತ್ಯೆ ಮಾಡಲಾಗಿದ್ದು, ಇಡೀ ದೇಶವನ್ನೇ ಅಲ್ಲಾಡಿಸಿದೆ. ಉದ್ರಿಕ್ತ ಗುಂಪಿನ ಹತ್ಯೆಯ ಕೃತ್ಯವನ್ನು ಪ್ರಧಾನಿ ಮೋದಿ ಸರಕಾರದ ಸಚಿವರೊಬ್ಬರು ‘ಒಂದು ಅಪಘಾತವೆಂದು’ ಬಣ್ಣಿಸುತ್ತಾರೆ.
ತಮ್ಮದೇ ಸರಕಾರದ ತೀವ್ರವಾದಿಗಳಿಗೆ ಮುಕ್ತ ಸ್ವಾತಂತ್ರ ನೀಡಿದ್ದಕ್ಕಾಗಿ ಮೋದಿ ಟೀಕೆಯ ಮಾತುಗಳನ್ನು ಕೇಳಬೇಕಾಗಿ ಬಂದಿದೆ. ಜೊತೆಗೆ, ಈ ವ್ಯಕ್ತಿಗಳು ಮೋದಿಯವರ ತಲೆನೋವಿಗೂ ಕಾರಣರಾಗಿದ್ದಾರೆ.
ಆರ್ಥಿಕ ಸುಧಾರಣೆಗಳು: ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕಟ್ಟಿ ಹಾಕಿವೆ. ಇದೇ ಕಾರಣದಿಂದ ಮಹತ್ವದ ಭೂಸುಧಾರಣಾ ತಿದ್ದುಪಡಿ ಮಸೂದೆ ಮತ್ತು ತೆರಿಗೆ ಮಸೂದೆಗಳು ಬಾಕಿ ಉಳಿದುಕೊಂಡಿವೆ. ಧಾರ್ಮಿಕ ವಿವಾದಗಳಲ್ಲಿ ಸರಕಾರವನ್ನು ಟೀಕಿಸುವ ಇಲ್ಲವೇ ಖಂಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ.
ಭಾರತವನ್ನು ಜಗತ್ತಿನ ಮಹತ್ವದ ಶಕ್ತಿಯನ್ನಾಗಿ ರೂಪಿಸುವಲ್ಲಿ ಮೋದಿ ಮತ್ತು ಆರೆಸ್ಸೆಸ್ ಧುರೀಣರು ದೀರ್ಘಾವಧಿಯ ಮುನ್ನೋಟವನ್ನು ಹೊಂದಿದ್ದಾರೆ. ಆದರೆ, ಇದರ ಸಾಧನೆಯಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ಇದ್ದಂತಿವೆ. ಆರ್ಥಿಕ ಸುಧಾರಣೆಯಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಲು ಮೋದಿ ಬಯಸಿದ್ದಾರೆ. ಚುನಾವಣಾ ಗೆಲುವಿಗೆ ಅವರು ಆರೆಸ್ಸೆಸ್‌ನ ಮೇಲೆ ಅವಲಂಬಿಸಿರುವಂತೆಯೂ ಕಾಣುತ್ತಿಲ್ಲ.

vb

Leave a Reply

Your email address will not be published. Required fields are marked *

*