Home / News / ವಾಜುಭಾಯ್‌ ವಾಲಾ ರಾಜ್ಯದ ರಾಜ್ಯಪಾಲ

ವಾಜುಭಾಯ್‌ ವಾಲಾ ರಾಜ್ಯದ ರಾಜ್ಯಪಾಲ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಷ್ಠರಾದ, ಗುಜರಾತ್ ವಿಧಾನಸಭೆ ಸ್ಪೀಕರ್‌ ವಾಜುಭಾಯ್‌ ವಾಲಾ (76) ಅವರನ್ನು ಕರ್ನಾಟಕದ ರಾಜ್ಯಪಾಲ­ರಾಗಿ ನೇಮಕ ಮಾಡಲಾಗಿದೆ.

ಎಚ್‌.ಆರ್‌. ಭಾರದ್ವಾಜ್‌ ಅವ­ರಿಂದ ತೆರವಾದ ಕರ್ನಾಟಕ ರಾಜ್ಯ­ಪಾಲರ ಹುದ್ದೆ ಮೇಲೆ ಕೇರಳ ಬಿಜೆಪಿ ನಾಯಕ ಒ. ರಾಜಗೋಪಾಲ್‌, ಮಾಜಿ ಕೇಂದ್ರ ಸಚಿವ ವಿಜಯ ಕುಮಾರ್‌ ಮಲ್ಹೋತ್ರಾ, ಖ್ಯಾತ ವಕೀಲ ಸೋಲಿ ಸೊರಾಬ್ಜಿ ಅವರೂ ಸೇರಿದಂತೆ ಅನೇಕರು ಕಣ್ಣಿಟ್ಟಿದ್ದರು. ಆದರೆ, ಯಾರೂ ನಿರೀಕ್ಷಿಸದ ವಾಜು­ಭಾಯ್‌ ಅವರನ್ನು ಗುಜರಾತಿನ ಗಾಂಧಿ ನಗರದಿಂದ ಕರ್ನಾಟಕದ ರಾಜಭವನಕ್ಕೆ ಕಳುಹಿಸುವ ತೀರ್ಮಾನ ಮಾಡಿ ಅಚ್ಚರಿ ಮೂಡಿ­ಸಲಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯ­ಮಂತ್ರಿ ಕಲ್ಯಾಣ್‌­ಸಿಂಗ್‌, ನಿರೀಕ್ಷೆಯಂತೆ ರಾಜಸ್ತಾನ ರಾಜ್ಯಪಾಲರಾಗಿ ನೇಮಕ­ಗೊಂಡಿದ್ದಾರೆ. ಮಾಜಿ ಕೇಂದ್ರ ಸಚಿವೆ ಸಿ. ವಿದ್ಯಾಸಾಗರ ರಾವ್‌ ಮಹಾರಾಷ್ಟ್ರ ರಾಜ್ಯಪಾಲರಾಗಿ ಅಧಿಕಾರ ವಹಿಸಿ­ಕೊಳ್ಳ­­ಲಿದ್ದಾರೆ.

ಮಹಾರಾಷ್ಟ್ರ ರಾಜ್ಯ­ಪಾಲ­­ರಾಗಿದ್ದ ಕೆ.ಶಂಕರ ನಾರಾ­ಯಣನ್‌ ಅವರನ್ನು ಭಾನುವಾರ ಕೇಂದ್ರ ಸರ್ಕಾರ ಮಿಜೋರಾಂಗೆ ವರ್ಗಾ ಮಾಡಿದ ಬಳಿಕ ಅವರು ರಾಜೀನಾಮೆ ನೀಡಿದ್ದರು. ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷ ಮೃದುಲಾ ಸಿನ್ಹಾ ಅವರನ್ನು  ಗೋವಾ ರಾಜ್ಯಪಾಲರಾಗಿ ನೇಮಿಸಲಾಗಿದೆ.

ರಾಷ್ಟ್ರಪತಿ ಭವನ ಮಂಗಳವಾರ ಬಿಡುಗಡೆ ಮಾಡಿದ ರಾಜ್ಯಪಾಲರ ಪಟ್ಟಿಯಲ್ಲಿ ಕಲ್ಯಾಣ್‌ಸಿಂಗ್‌ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಅನಿರೀಕ್ಷಿತ ಹೆಸರುಗಳು. ವಾಜು­ಭಾಯ್‌, ವಿದ್ಯಾಸಾಗರ ರಾವ್‌ ಮತ್ತು ಮೃದುಲಾ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ರಾಜ್ಯಪಾಲರಾಗಿ ನೇಮಿಸ­ಲಿದೆ ಎಂದು ಯಾರೂ ಊಹಿಸಿರಲಿಲ್ಲ. ಬೇರೆ ಬೇರೆ ಹೆಸರುಗಳು ಇದುವರೆಗೂ ಚಲಾವಣೆಯಲ್ಲಿದ್ದವು.

ಮೋದಿ ಉಡುಗೊರೆ
ಗುಜರಾತ್‌ ವಿಧಾನ ಸಭೆ ಸ್ಪೀಕರ್‌ ವಾಜುಭಾಯ್‌ ಅವರಿಗೆ ಕರ್ನಾಟಕ ರಾಜ್ಯಪಾಲ ಹುದ್ದೆ ‘ಉಡುಗೊರೆ’ ಆಗಿ ಬಂದಿದೆ. 13 ವರ್ಷದ ಹಿಂದೆ ವಾಜು­ಭಾಯ್‌ ತಮಗೆ ಮಾಡಿದ ಉಪಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆನಪಿಟ್ಟುಕೊಂಡು ಈ ಉಡು ಗೊರೆ ನೀಡಿದ್ದಾರೆ ಎಂದು ಉನ್ನತ ಬಿಜೆಪಿ ಮೂಲಗಳು ತಿಳಿಸಿವೆ.

2001ರಲ್ಲಿ ಕೇಶುಭಾಯ್‌ ಪಟೇಲರ ಉತ್ತರಾ­ಧಿಕಾರಿ ಆಗಿ ನೇಮಕಗೊಂಡ ನರೇಂದ್ರ ಮೋದಿ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಡಿದ್ದರು. ಆಗ ಯಾವ ಸಚಿವರು ಮತ್ತು ಶಾಸಕರು ಕ್ಷೇತ್ರ ಬಿಟ್ಟುಕೊಡಲು ತಯಾರಿರಲಿಲ್ಲ. ಅಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಮೋದಿ ಅವರ ನೆರವಿಗೆ ಧಾವಿಸಿದವರು ಹಣ­ಕಾಸು ಸಚಿವರಾಗಿದ್ದ ವಾಜು­ಭಾಯ್‌. ಆಗ ಸೌರಾಷ್ಟ್ರದ ರಾಜ್‌ಕೋಟ್‌ ವಿಧಾನಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದರು.

2002ರ ಫೆಬ್ರುವರಿಯಲ್ಲಿ ನಡೆದ ಉಪ ಚುನಾ ವಣೆ ಯಲ್ಲಿ ಮೋದಿ ಅತ್ಯಂತ ಪ್ರಯಾಸದಿಂದ ಗೆದ್ದರು. ಅವರ ಗೆಲುವಿನ ಅಂತರ ಬರೀ 14,728. ಅದೇ ಸಂದರ್ಭದಲ್ಲಿ ಚುನಾವಣೆ ಎದುರಿಸಿದ ಉಳಿದೆರಡು ಕ್ಷೇತ್ರಗಳು ಕಾಂಗ್ರೆಸ್‌ ಪಾಲಾದವು.

ಮೊದಲು ಕೇಶುಭಾಯ್‌ ಪಟೇಲ್‌ ಅವರಿಗೆ ನಿಷ್ಠರಾಗಿದ್ದ ವಾಜು­ಭಾಯ್‌ ಅನಂತರ ನಿಷ್ಠೆ ಬದಲಿಸಿದರು. ಹಿರಿಯ ನಾಯಕ­ನಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದ್ದರೂ ಅದ­ಕ್ಕಾಗಿ ಹಾತೊರೆ­ದವರಲ್ಲ. ಈ ಗುಣವೇ ಅವರನ್ನು ರಾಜ­ಭವನಕ್ಕೆ ಕರೆತಂದಿದೆ ಎಂದು ಮೂಲ­ಗಳು ಸ್ಪಷ್ಟಪಡಿಸಿವೆ.

ನರೇಂದ್ರ ಮೋದಿ ಪ್ರಧಾನಿ ಆಗಿ ನೇಮಕ­ಗೊಂಡ ಬಳಿಕ ಗುಜ­ರಾತ್‌ ಮುಖ್ಯಮಂತ್ರಿ ಸ್ಥಾನಕ್ಕೆ ವಾಜುಭಾಯ್‌ ಹೆಸರು ಪ್ರಬಲವಾಗಿದ್ದರೂ ವಯಸ್ಸು ಅಡ್ಡಿ­­ಯಾಯಿತು. ಆನಂದಿ­ಬೆನ್‌ ಪಟೇಲ್‌ ಅವರನ್ನು ಮೋದಿ ತಮ್ಮ ಉತ್ತರಾ­ಧಿಕಾರಿಯಾಗಿ ಆಯ್ಕೆ ಮಾಡಿ­ದರು. ಇದರಿಂದ ವಾಲಾ ಅಸಮಾ­­ಧಾನ­ಗೊಳ್ಳಲಿಲ್ಲ. ಕಳೆದ ಜನ­ವರಿ­­ಯಲ್ಲಿ ವಾಜು­­ಭಾಯ್‌ ಸಚಿವ ಸ್ಥಾನಕ್ಕೆ ರಾಜೀ­ನಾಮೆ ನೀಡಿ ವಿಧಾನ­ಸಭೆ ಸ್ಪೀಕರ್‌ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ­ಯಾ­ದರು. ಮುಖ್ಯಮಂತ್ರಿ ವಹಿಸಿದ್ದ ಜವಾ­­ಬ್ದಾರಿಯನ್ನು ಅವರು ಮರು ಮಾತಾಡದೆ ಒಪ್ಪಿ­ಕೊಂ­ಡರು. ಆ ಸಂದರ್ಭ­ದಲ್ಲಿ ವಾಜು­ಭಾಯ್‌ ಅವರ ವ್ಯಕ್ತಿತ್ವವನ್ನು ಮೋದಿ ಕೊಂಡಾಡಿ­ದ್ದರು.

ಆರ್‌ಎಸ್‌ಎಸ್‌ ಪರಿಸರದಲ್ಲಿ ಬೆಳೆದು ಬಂದ ವಾಜು­ಭಾಯ್‌ ಕೆಳ ಹಂತ­­ದಿಂದ ರಾಜಕಾರಣ ಆರಂಭಿಸಿ­ದವರು. ಮೊದ­ಲಿಗೆ ರಾಜ್‌ಕೋಟ್‌ ನಗರ­ಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿ­ದ್ದರು. ಅನಂತರ ಮೇಯರ್‌ ಸ್ಥಾನಕ್ಕೂ ಏರಿ­ದರು. ಗುಜ­ರಾತ್‌ ವಿಧಾನಸಭೆಗೆ ಆರು ಸಲ ಆಯ್ಕೆ­ಯಾಗಿರುವ ಅವರು ದೀರ್ಘ ಅವಧಿ ರಾಜ್ಯದ ಹಣಕಾಸು ಸಚಿವ­­ರಾಗಿ ಕೆಲಸ ಮಾಡಿ­ದ್ದಾರೆ. ವಾಜು­ಭಾಯ್‌ ರಾಜ್ಯ ಬಿಜೆಪಿಯ ಜನಪ್ರಿಯ ನಾಯಕ. ರಾಜ್ಯದ ಪ್ರಮುಖ ಬಿಜೆಪಿ ಕಾರ್ಯ­ಕರ್ತರು, ನಾಯ­ಕ­­­ರನ್ನು ಹೆಸರಿಡಿದು ಕರೆಯು­ತ್ತಾರೆ. 76 ವರ್ಷ­­ವಾಗಿದ್ದರೂ ನೆನಪಿನ ಶಕ್ತಿ ಅಗಾಧ­ವಾಗಿದೆ. ಜನರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನರ ಸಮ­ಸ್ಯೆಗೆ ಸ್ಪಂದಿ­ಸುವ ಮನಸ್ಸು ಅವರಿಗಿದೆ ಎಂದು ಬಿಜೆಪಿ ಮೂಲಗಳು ವಿವರಿಸಿವೆ.

Prajavani

Leave a Reply

Your email address will not be published. Required fields are marked *

*