Home / News / Malnad / Kodagu / ಶೋಕಗೀತೆ ಹಾಡುತ್ತಿರುವ ರಸ್ತೆಗಳು

ಶೋಕಗೀತೆ ಹಾಡುತ್ತಿರುವ ರಸ್ತೆಗಳು

by malandnews 12/5/2014

 

ಸೋಮವಾರಪೇಟೆ: ತಾಲ್ಲೂಕಿನ ಹಲವೆಡೆ ಗ್ರಾಮೀಣ ರಸ್ತೆಗಳು ಶೋಚನೀಯ ಸ್ಥಿತಿ ತಲುಪಿದ್ದು, ಸದ್ಯದಲ್ಲೇ ಮಳೆಗಾಲ ಆರಂಭವಾಗುವುದರಿಂದ ಗ್ರಾಮೀಣ ಭಾಗದ ಜನರು ಮತ್ತೆ ಬವಣೆಪಡಬೆಕಾಗುತ್ತದೆ.

ಬಿಳಿಗೇರಿ, ತೋಳೂರುಶೆಟ್ಟಳ್ಳಿ, ಶಾಂತಳ್ಳಿ, ಮಲ್ಲಳ್ಳಿ, ಕುಮಾರಳ್ಳಿ, ಕಿರಗಂದೂರು, ಅಬ್ಬೂರುಕಟ್ಟೆ ಸೇರಿದಂತೆ ಹಲವಾರು ಗ್ರಾಮಗಳ ರಸ್ತೆಗಳು ಕಳೆದಬಾರಿ ಮಳೆಗಾಲಕ್ಕೂ ಮೊದಲೇ ಹಾಳಾಗಿದ್ದವು. ನಂತರ ಸುರಿದ ಭಾರಿ ಮಳೆಗೆ ಜನರು ತೀವ್ರ ಸಂಕಷ್ಟ ಎದುರಿಸುವಂತಾಯಿತು. ಈ ಸ್ಥಿತಿ ಈ ಬಾರಿಯೂ ಮರುಕಳಿಸುವ ಎಲ್ಲ ಸಾಧ್ಯತೆಗಳೂ ಇವೆ.

ಕಳೆದ ಬಾರಿಯ ಮಳೆಗಾಲದ ಬಳಿಕ ಇಲ್ಲಿಯವರೆಗೂ ಹೆಚ್ಚಿನ ರಸ್ತೆಗಳನ್ನು ಸರಿಪಡಿಸುವ ಗೋಜಿಗೆ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿಲ್ಲ. ಕೆಲವು ಗ್ರಾಮಗಳ ರಸ್ತೆಗಳು ಮರು ನಿರ್ಮಾಣವಾದರೂ ಹೆಚ್ಚಿನವು ಕಳಪೆಯದ್ದಾಗಿವೆ ಎಂದು ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿದರು.

ಕೊಡಗಿನ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರವಾಸಿತಾಣಗಳಿದ್ದು, ಅವುಗಳಿಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಹಾದಿ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುವುದರಿಂದ ಇಲ್ಲಿ ವಾಹನಗಳಿರಲಿ ಜನರು ಸಹ ನಡೆದಾಡಲು ಆಗುವುದಿಲ್ಲ.

ಇನ್ನು ಇಲ್ಲಿನ ತಾಕೇರಿ, ಬಿಳಿಗೇರಿ ಗ್ರಾಮಗಳು ಹಚ್ಚ ಹಸಿರಿನ ಬೆಟ್ಟಗುಡ್ಡಗಳಿಂದ ಕೂಡಿದ್ದು, ಇಲ್ಲಿ ಹಲವಾರು ವರ್ಷಗಳ ಹಿಂದೆ ರಸ್ತೆಗಳು ಡಾಂಬರೀಕರಣಗೊಂಡಿದ್ದವು. ನಂತರ ಅವುಗಳನ್ನು ಇಲಾಖೆ ಮರೆತ್ತಿದ್ದರಿಂದ ಇಲ್ಲಿನ ರಸ್ತೆಗಳು ಗುಂಡಿಮಯವಾಗಿವೆ. ಕೋಟಿ ವೆಚ್ಚದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಈಶ್ವರ, ಪಾರ್ವತಿ ಹಾಗೂ ಗಂಗೆ ದೇವಾಲಯವನ್ನು ಬಿಳಿಗೇರಿ ಗ್ರಾಮದಲ್ಲಿ ಹಾಗೂ ₨ 1.5 ಕೋಟಿ ವೆಚ್ಚದಲ್ಲಿ ತಾಕೇರಿ ಗ್ರಾಮದಲ್ಲಿ ಉಮಾಮಹೇಶ್ವರ ದೇವಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಈ ದೇವಾಲಯಗಳಿಗೆ ತೆರಳಲು ಮಾತ್ರ ಸೂಕ್ತ ರಸ್ತೆಗಳ ವ್ಯವಸ್ಥೆಯಿಲ್ಲ. ಈ ಗ್ರಾಮಗಳು ಬೆಟ್ಟಗುಡ್ಡಗಳಿಂದ ಕೂಡಿದ ಇಳಿಜಾರು ಪ್ರದೇಶವಾದ್ದರಿಂದ ಇಲ್ಲಿಗೆ ತೆರಳಲು ಪ್ರವಾಸಿಗು ಪರದಾಡಬೇಕಿದೆ.

ಬೇಳೂರು ಗ್ರಾಮ ಪಂಚಾಯಿತಿಯ ಬಜೆಗುಂಡಿ ಗ್ರಾಮದಲ್ಲಿಯಂತೂ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಹಲವು ವರ್ಷಗಳಿಂದ ಗ್ರಾಮಸ್ಥರು ರಸ್ತೆ ಸರಿಪಡಿಸುವಂತೆ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡದರೂ ರಸ್ತೆಗಳ ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಶಾಂತಳ್ಳಿ ಹೋಬಳಿಯ ಕುಂಬಾರಗಡಿಗೆ, ಜಕ್ಕನಳ್ಳಿ, ಕುಮಾರಳ್ಳಿಗಳಂತಹ ಕುಗ್ರಾಮಗಳಲ್ಲಿನ ರಸ್ತೆಗಳ ಪಾಡೂ ಅದೆ. ಇಲ್ಲಿಗೆ ಸರಿಯಾದ ವಾಹನ ವ್ಯವಸ್ಥೆಯಾಗಲೀ, ಬಸ್‌ ಸೌಕರ್ಯವಾಗಲೀ ಇಲ್ಲದ್ದರಿಂದ ತುರ್ತು ಪರಿಸ್ಥಿತಿಯಲ್ಲಿ ಗ್ರಾಮಸ್ಥರು ಪರದಾಡುವ ಪರಿಪಾಠ ದೂರವಾಗಿಲ್ಲ.

ಇನ್ನು ಕಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ತಕ್ಷಣ ರಸ್ತೆಗಳನ್ನು ಸರಿಪಡಿಸದಿದ್ದಲ್ಲಿ ಈ ಭಾಗಗಳ ಜನರು ಮಳೆಗಾಲ ಮುಗಿಯುವವರೆಗೂ ಪ್ರಾಣಿಗಳ ಹಾಗೆ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ.

(Prajavani)

Leave a Reply

Your email address will not be published. Required fields are marked *

*