Home / News / Malnad / Kodagu / ಹದಗೆಟ್ಟ ರಸ್ತೆ: ಸಂಚಾರ ದುಸ್ತರ

ಹದಗೆಟ್ಟ ರಸ್ತೆ: ಸಂಚಾರ ದುಸ್ತರ

ಸೋಮವಾರಪೇಟೆ: ಸಮೀಪದ ನೇರುಗಳಲೆಯಿಂದ ಗೌಡಳ್ಳಿಗೆ ಸಂಪರ್ಕ ಕಲ್ಪಿಸುವ, ತಣ್ಣೀರುಹಳ್ಳ, ವಳಗುಂದ ಗ್ರಾಮದ ಮೂಲಕ ತೆರಳುವ ಸಂಪರ್ಕ ರಸ್ತೆಯು ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ರಸ್ತೆಯನ್ನು ಸರಿಪಡಿಸಲು ಇಲ್ಲಿಯವರೆಗೆ ಯಾರೂ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಳಗುಂದ ಗ್ರಾಮದಲ್ಲಿ ಗಿರಿಜನ ಹಾಡಿ ಹಾಗೂ ಇತರ ಹಲವಾರು ಮನೆಗಳಿವೆ. ಇಲ್ಲಿಂದ ಸೋಮವಾರಪೇಟೆ ಪಟ್ಟಣದ ವಿವಿಧ ಶಾಲೆಗಳಿಗೆ ಹತ್ತಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಓಡಾಡುತ್ತಾರೆ.  ತೋಟಕ್ಕೆ ಕೃಷಿ ಪರಿಕರಗಳು ಹಾಗೂ ಕಾರ್ಮಿಕರನ್ನು ಕೊಂಡೂಯ್ಯಲು ಹಲವು ವಾಹನಗಳು ಪ್ರತಿ ದಿನ ಇದೇ ಮಾರ್ಗವನ್ನು ಅವಲಂಬಿಸಿವೆ.

ಕೆಲವು ವರ್ಷಗಳಿಂದ ದುಸ್ಥಿತಿಗೀಡಾದ ಈ ರಸ್ತೆಯ ಗುಂಡಿಗಳನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡುತ್ತಿದ್ದರು. ಅದರೆ, ಈಗ ರಸ್ತೆಯನ್ನು ಗ್ರಾಮಸ್ಥರು ಸರಿಪಡಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ 2 ಕಿ. ಮೀ. ರಸ್ತೆಯುದ್ದಕ್ಕೂ ಕಲ್ಲುಗಳು ಮೇಲೆದ್ದು ತೀವ್ರ ದುಸ್ಥಿತಿ ತಲುಪಿದೆ.

15 ವರ್ಷಗಳ ಹಿಂದೆ ಈ ಡಾಂಬರ್ ರಸ್ತೆ ನಿರ್ಮಾಣವಾಗಿತ್ತು. ನಂತರ ಈ ರಸ್ತೆಯ ಡಾಂಬರೀಕರಣ ಆಗಿಲ್ಲ. ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಜಿಲ್ಲಾಡಳಿತವಾಗಲಿ ಸಂಬಂಧ ಪಟ್ಟ ಇಲಾಖೆಯಾಗಲಿ, ಗಮನ ಹರಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆಗೆ ಮರು ಡಾಂಬರೀಕರಣ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ
15 ವರ್ಷಗಳ ಹಿಂದೆ ನಿರ್ಮಾಣವಾದ ಈ ರಸ್ತೆಯ ಬಗ್ಗೆ ಶಾಸಕರು ಸೇರಿ ಈ ಭಾಗದ ಜನಪ್ರತಿನಿಧಿಗಳಿಗೆ ತಿಳಿದಿದ್ದರೂ, ಅವ್ಯವಸ್ಥೆ ಸರಿಪಡಿಸಲು ಮುಂದಾಗುತ್ತಿಲ್ಲ.
– ಎಸ್.ಕೆ. ವಿಜೀತ್‌ಕುಮಾರ್, ವಳಗುಂದ ಗ್ರಾಮಸ್ಥ

ಈ ರಸ್ತೆಯಲ್ಲಿ ಬರಲು ಒಪ್ಪುವುದಿಲ್ಲ
ಜನಪ್ರತಿನಿಧಿಗಳು ಮತದಾನದ ಸಮಯದಲ್ಲಿ ಮಾತ್ರ ಭರವಸೆ ನೀಡುತ್ತಾರೆ. ಆ ನಂತರ ನಮ್ಮ ಸಮಸ್ಯೆಗಳ ಬಗ್ಗೆ ತಿರುಗಿಯೂ ನೋಡುವುದಿಲ್ಲ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ನಮ್ಮ ಮನೆಗಳಿಗೆ ಬಾಡಿಗೆ ವಾಹನ ಬೇಕಾದರೆ, ಯಾರೂ ಈ ರಸ್ತೆಯಲ್ಲಿ ಬರಲು ಒಪ್ಪುವುದಿಲ್ಲ. ಕೂಡಲೇ ಸಂಬಂಧಿಸಿದವರು ಈ ರಸ್ತೆಯನ್ನು ಸರಿಪಡಿಸಿಕೊಡಬೇಕು.
– ಕೇಶವ, ತಣ್ಣೀರುಹಳ್ಳ ಗ್ರಾಮಸ್ಥ

Source – Prajavani

Leave a Reply

Your email address will not be published. Required fields are marked *

*