Home / News / Malnad / Kodagu / ಹಳೆ ಸೀರೆಗೆ ಕೌದಿ ಸೊಬಗು

ಹಳೆ ಸೀರೆಗೆ ಕೌದಿ ಸೊಬಗು

ಶನಿವಾರಸಂತೆ: ಬಣ್ಣಬಣ್ಣದ ಚಿತ್ತಾರದ ವೈವಿಧ್ಯಮಯ ಹೊದಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ, ಇವುಗಳ ಆರ್ಭಟದ ನಡುವೆಯೂ ಹಳೇ ಕಾಲದ ಕೌದಿ ತನ್ನ ಸೊಬಗು ಕಳೆದುಕೊಂಡಿಲ್ಲ. ಮಲೆನಾಡಿನ ಜನ ಅದರಲ್ಲೂ ಮಹಿಳೆಯರು ಇವತ್ತಿಗೂ ಕೌದಿಯನ್ನು ಇಷ್ಟಪಡುತ್ತಾರೆ. ಈಚೆಗೆ ಕೌದಿ ಹೊಲಿದುಕೊಡುವ ಗಂಗಮ್ಮ ಶನಿವಾರಸಂತೆಗೆ ಬಂದಿದ್ದರು.

ಹಾಸನ ನಗರದ ಇವರ ಗಂಗಮ್ಮ ಅವರ ಕಲಾ ಕೌಶಲಕ್ಕೆ ಮಾರುಹೋದ ಹಲವರು ಅವರಿಂದ ಕೌದಿಯನ್ನು ಹೊಲಿಸಿಕೊಂಡರು.
ಮರಾಠಿ ದರ್ಜಿ ಕುಟುಂಬದ 55 ವರ್ಷ ಹರೆಯದ ಗಂಗಮ್ಮ ನ ಕುಟುಂಬದ ವೃತ್ತಿಯೇ ಕೌದಿ ಹೊಲಿಯುವುದು. ವರ್ಷದಲ್ಲಿ ಒಂದು ತಿಂಗಳು ಮಾತ್ರ ಊರೂರು ಸುತ್ತುತ್ತ ಕೌದಿ ಹೊಲಿದುಕೊಟ್ಟು ಧನ ಸಂಪಾದಿಸುತ್ತಾರೆ.

ಮನೆಯಲ್ಲಿರುವ ಹಳೆಯ ಬಟ್ಟೆ, ಹಳೆಯ ಸೀರೆ ಅಥವಾ ಹಳೆಯ ಹೊದಿಕೆಗಳನ್ನು ಕೊಟ್ಟರೆ, ಅವುಗಳನಲ್ಲ ಸೇರಿಸಿ ಅರ್ಧ, ಒಂದು ಗಂಟೆಯೊಳಗೆ ಒಂದು ಕಲಾತ್ಮಕ ಕೌದಿಯನ್ನು ಇವರು ಹೊಲಿದುಕೊಡುತ್ತಾರೆ. ಬಣ್ಣದ ದಾರ ಮತ್ತೊಂದು ದೊಡ್ಡ ಸೂಜಿ ಹಿಡಿದು ಕುಳಿತರೆ ಇವರ ಕರ ಕೌಶಲ ಬೆರಗು ಮೂಡಿಸುತ್ತದೆ.

ದಿನವೊಂದಕ್ಕೆ 4ರಿಂದ 5 ಕೌದಿಗಳನ್ನು ಹೊಲಿಯುತ್ತಾರೆ. ಒಂದು ಕೌದಿ ಹೊಲಿದುಕೊಡಲು  ₨ 70 ರಿಂದ 80 ಬೆಲೆ. ಗಂಗಮ್ಮ ಅವರ ಸೊಸೆಯಂದಿರೂ ಇದೇ ಕಾಯಕ ಮಾಡುತ್ತಾರೆ. ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಎಸೆಯುವ ಬದಲು ಕಸದಿಂದ ರಸ ಮಾಡಿಸಿಕೊಳ್ಳಬಹುದು. ಹಾಸಿಕೊಳ್ಳಲು ಇಲ್ಲವೇ ಹೊದೆದುಕೊಳ್ಳಲೂ ಕೌದಿ ಸಮಯಕ್ಕೆ ತಕ್ಕಂತೆ ಉಪಯೋಗಕ್ಕೆ ಬರುತ್ತದೆ.

ಮನೆಗಳಲ್ಲಿ ಮದುವೆಯೋ ಮತ್ತಾವುದೋ ಸಮಾರಂಭಗಳು ನಡೆದಾಗ ಅಪಾರ ಸಂಖ್ಯೆಯಲ್ಲಿ ಬಂದಂಥ ಬಂಧುಗಳಿಗೆ ಮಲಗುವುದಕ್ಕಾಗಿ ಕೌದಿ ನೀಡಬಹುದು. ಮಳೆಗಾಲ, ಚಳಿಗಾಲಕ್ಕೆ ಹೇಳಿಮಾಡಿಸಿದ ಹೊದಿಕೆ ಈ ಕೌದಿ.

Prajavani

Leave a Reply

Your email address will not be published. Required fields are marked *

*